ಬೆಲೆಗಳ ಸ್ಥಾಯೀಕರಣ

	ಬಂಡವಾಳವಾದಿ ಅರ್ಥ ವ್ಯವಸ್ಥೆಯಲ್ಲಿ ಬೆಲೆಗಳು ಸಹಜವಾಗಿ ಏರಿಳಿಯುತ್ತಿರುವುವು, ಇದು ಸಹಜ ಪ್ರವೃತ್ತಿ. ಬೆಲೆಗಳ ಏರಿಳಿತ ಅನೇಕ ವೇಳೆ ಸರ್ಕಾರದ ಆರ್ಥಿಕ ನೀತಿಯನ್ನು ಅವಲಂಬಿಸಿರುತ್ತದೆ. ಅಧಿಕ ಹಣ ವಿನಿಯೋಗದ ಮೂಲಕ ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಉದ್ಯೋಗ ಬೆಳೆದು ಜನರ ವರಮಾನ ಆಧಿಕವಾಗುತ್ತದೆ. ಹಣದ ಅತಿಪ್ರಸರಣ ಉಂಟಾಗುತ್ತದೆ. ಬೆಲೆ ಹಾಗೂ ಬೇಡಿಕೆಗಳ ಇಳಿತ, ಉತ್ಪಾದನೆಯ ಕಡಿತ, ವರಮಾನಗಳ ಕುಗ್ಗುವಿಕೆಯಿಂದ ಆರ್ಥಿಕ ಮುಗ್ಗಟ್ಟು ತಲೆದೋರುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಬೆಲೆಗಳ ಸ್ಥಾಯೀಕರಣ (ಪ್ರೈಸ್ ಸ್ಟೆಬಿಲೈಸೇಶನ್) ಒಂದು ಮುಖ್ಯ ಮಾರ್ಗ. 

	ಭೂಮಾಲೀಕರು ಹಾಗೂ ಸರ್ಕಾರ ಅನುತ್ಪಾದಕ ವೆಚ್ಚದ ಗಾತ್ರವನ್ನು ಹೆಚ್ಚಿಸುವುದು ಆರ್ಥಿಕ ಮುಗ್ಗಟ್ಟಿಗೆ ಪರಹಾರವೆಂದು ಮಾಲ್ತಸ್ ಹೇಳಿದ. ಇದರಿಂದ ನಿರುದ್ಯೋಗ ಕಡಿಮೆಯಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚುತ್ತದೆ. ಹತ್ತೊಂಬತ್ತನೆಯ ಹಾಗೂ ಎಪ್ಪತ್ತನೆಯ ಶತಮಾನಗಳಲ್ಲಿ ರಾಡ್‍ಬರ್ಟಸ್, ಜೆ.ವಿ. ಹಾಬ್ಸನ್ ಮತ್ತು ಇತರ ಅನೇಕ ಅರ್ಥಶಾಸ್ತ್ರಜ್ಞರು ಆರ್ಥಿಕ ಮುಗ್ಗಟ್ಟಿನ ಕಾರಣಗಳನ್ನು ಪ್ರಸ್ತಾಪಿಸಿ ಉಪಾಯ ಸೂಚಿಸಿದ್ದಾರೆ.

	ಭೂಮಾಲೀಕರು ಮತ್ತು ಬಂಡವಾಳಗಾರರು ಉತ್ಪನ್ನದ ಅಧಿಕ ಭಾಗವನ್ನು ಉಳಿತಾಯ ಹಾಗೂ ವಿನಿಯೋಜನೆಯ ಹಣವೆಂದು ತೆಗೆದಿಟ್ಟು, ಶ್ರಮಜೀವಿಗಳಿಗೆ ಕಡಿಮೆ ಪ್ರಮಾಣದಲ್ಲಿ ಕೂಲಿ ಕೊಡುವರು. ಇದರಿಂದ ಕೂಲಿಗಾರರು ತಾವೇ ಉತ್ಪಾದಿಸಿದ ವಸ್ತುಗಳನ್ನು ಕೊಂಡುಕೊಳ್ಳಲು ಅಸಮರ್ಥರಾಗುತ್ತಾರೆ. ವಸ್ತುಗಳು ಮಾರಾಟವಾಗದೆ ಉಳಿದು, ಕಾರ್ಖಾನೆಗಳಲ್ಲಿಯ ಉತ್ಪಾದನಾಕಾರ್ಯ ಮಂದಗತಿಯಾಗುತ್ತದೆ. ಇದು ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಇದಕ್ಕೆ ಪರಿಹಾರವಾಗಿ ಸರ್ಕಾರ ಕಾರ್ಮಿಕರಿಗೆ ಯುಕ್ತವೇತನ ದೊರೆಯುವಂತ ವೇತನಧೋರಣೆ ರೂಪಿಸಬೇಕು ಎಂದು ಅರ್ಥಶಾಸ್ತ್ರಜ್ಞರು ವಾದಿಸಿದ್ದಾರೆ. ಲಾರ್ಡ್ ಕೇನ್ಸನ ಪ್ರಕಾರ ಉಳಿತಾಯ ಮತ್ತು ಹಣವಿನಿಯೋಜನೆಗಳಲ್ಲಿಯ ಅಸಮತೆಯಿಂದ ಬೆಲೆಗಳಲ್ಲಿ ಏರಿಳಿತಗಳು ಉಂಟಾಗುತ್ತವೆ. ಉದ್ಯಮಗಳಲ್ಲಿ ತೊಡಗಿಸಿದ ಬಂಡವಾಳದ ಗಾತ್ರದ ವ್ಯತ್ಯಾಸದಿಂದ ಜನರ ವರಮಾನದಲ್ಲೂ ಬದಲಾವಣೆಯಾಗುತ್ತದೆ. ಜನತೆಯ ಕೊಳ್ಳುವ ಶಕ್ತಿಗೆ ಅನುಗುಣವಾಗಿ ಬೆಲೆಗಳು ಏರುತ್ತಾ ಅಥವಾ ಇಳಿಯುತ್ತಾ ಹೋಗುವುವು. ಆದ್ದರಿಂದ ಬೆಲೆಗಳ ಏರಿಳಿತ ತಡೆಯಲು ಉಳಿತಾಯ ಹಾಗೂ ಹಣವಿನಿಯೋಜನೆಯ ಗಾತ್ರಗಳಲ್ಲಿ ಸಮತೆ ಅವಶ್ಯ. ಇದರಿಂದ ಜನರ ವರಮಾನದಲ್ಲಿ ಸ್ಥಿರತೆ ಉಂಟಾಗಿ ಬೆಲೆಗಳು ಕೂಡ ಸ್ಥಿರವಾಗುವ ಪ್ರವೃತ್ತಿ ತೋರುತ್ತವೆ.

	ಹಿಂದೆ ಹಣದ ಅತಿಪ್ರಸರಣ ತಡೆದು ಬೆಲೆಗಳನ್ನು ಸ್ಥಾಯಿಗೊಳಿಸಲು ಸ್ವರ್ಣ ನಾಣ್ಯ ಪ್ರಮಿತಿಯನ್ನು ಸಾಧನವಾಗಿ ಬಳಸಲಾಗುತ್ತಿತ್ತು. ಒಂದನೆಯ ಮಹಾಯುದ್ಧದ ಅನಂತರ ಅನೇಕ ರಾಷ್ಟ್ರಗಳು ಅತಿಪ್ರಸರಣದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬ್ರಿಟನ್ ಮತ್ತು ಇತರ ರಾಷ್ಟ್ರಗಳು ಸ್ವರ್ಣಗಟ್ಟಿ ಪ್ರಮಿತಿಯನ್ನು 1925ರಲ್ಲಿ ಸ್ವೀಕರಿಸಿದುವು. ನಾಣ್ಯದ ಆಂತರಿಕ ಮತ್ತು ಬಾಹ್ಯ ಮೌಲ್ಯಗಳನ್ನು ನಿರ್ಧರಿಸಲಾಯಿತು. ಬ್ರಿಟಿಷ್ ಪೌಂಡ್ ಮತ್ತು ಫ್ರೆಂಚ್ ಫ್ರಾಂಕುಗಳ ವಿನಿಮಯ ದರಗಳಲ್ಲಿಯ ಅಂತರದಿಂದ ಬ್ರಿಟನ್ನಿನ ರಫ್ತು ಕಡಿಮೆಯಾಗಿ ಆಮದು ಹೆಚ್ಚಿತು. ಇದರಿಂದ ಫ್ರಾನ್ಸಿನ ಚಿನ್ನದ ಸಂಗ್ರಹ ಅಧಿಕವಾಗಿ ಬ್ರಿಟನ್ನಿನ ಸಂಗ್ರಹ ಕಡಿಮೆ ಆಗತೊಡಗಿತು. ನಾಣ್ಯ ಚಲಾವಣೆಯೂ ಕಡಿಮೆಯಾಗಿ ಬೆಲೆಗಳು ಇಳಿಯಲಾರಂಭಿಸಿದುವು. ದೇಶದಲ್ಲಿಯ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ನಿರುದ್ಯೋಗವೇ ಮೊದಲಾದ ಅನೇಕ ಸಮಸ್ಯೆಗಳು ತಲೆದೋರಿದುವು. ಕಾರ್ಮಿಕರು ಕಡಿಮೆ ವೇತನ ಸ್ವೀಕರಿಸಲು ಸಿದ್ಧರಾಗಿರಲಿಲ್ಲ. ಬ್ರಿಟಿಷ್ ಸರ್ಕಾರ ಬೆಲೆಗಳಲ್ಲಿ ಭದ್ರತೆ ಉಂಟುಮಾಡಲು ಅಮೆರಿಕದ ಚಿನ್ನ ಕೊಳ್ಳಬೇಕಾಯಿತು. ಇಂಥ ಆರ್ಥಿಕ ಪರಿಸ್ಥಿತಿಯಿಂದ ಸ್ವರ್ಣಪ್ರಮಿತಿಕಾರ್ಯ ಮಾಡಲಾರದೆಂದು ತಿಳಿದು ಸರ್ಕಾರ ಆ ಪದ್ಧತಿಯನ್ನು ತ್ಯಜಿಸಿತು. ಇದೇ ವೇಳೆ ಕೇನ್ಸನ ವಿಚಾರ ಸರಣಿಯ ಪ್ರಕಾರ ಸ್ವರ್ಣಪ್ರಮಿತಿಯ ಪದ್ಧತಿಯಲ್ಲಿ ನಾಣ್ಯದ ಆಂತರಿಕ ಮೌಲ್ಯ ಅದರ ಬಾಹ್ಯ ಅಥವಾ ವಿದೇಶಿ ಮೌಲ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಹೆಚ್ಚು ಶ್ರೀಮಂತ ರಾಷ್ಟ್ರಗಳಲ್ಲಿ ಚಿನ್ನದ ಸಂಗ್ರಹ ಅಧಿಕವಾಗಿ ಇತರ ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಕೊರತೆ ಹಣದ ಮೂಲಕ ತನ್ನ ವೆಚ್ಚ ಹೆಚ್ಚಿಸಿ ಹಣದ ವರಮಾನ ಸೃಷ್ಟಿಸಿ ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಇಟ್ಟು ಬೇಡಿಕೆ ಕುದುರಿಸಿ ಉತ್ಪಾದನೆಗೆ ಉತ್ತೇಜನ ನೀಡಿ ರಾಷ್ಟ್ರೀಯ ವರಮಾನ ಹೆಚ್ಚಿಸಿ ಅಭ್ಯುದಯ ಸಾಧಿಸಬಹುದು ಎಂಬುದು ಸ್ಥೂಲವಾಗಿ ಕೇನ್ಸನ ವಾದಸರಣಿ. 

	ಈಚಿನ ವರ್ಷಗಳಲ್ಲಿ ದೇಶದೇಶಗಳ ನಡುವಣ ಆರ್ಥಿಕ ಸಂಪರ್ಕ ಹೆಚ್ಚುತ್ತಿದೆ. ಅವುಗಳ ನಾಣ್ಯಗಳ ವಿದೇಶೀಯ ವಿನಿಮಯ ಮೌಲ್ಯಗಳು ವ್ಯತ್ಯಾಸವಾಗುತ್ತಿರುತ್ತವೆ. ಆಂತರಿಕವಾಗಿಯೂ ಇದರ ಪರಿಣಾಮ ಕಂಡುಬರುತ್ತದೆ. ಹೀಗಾಗಿ ಬೆಲೆಗಳ ಸ್ಥಾಯೀಕರಣ ಕಷ್ಟಸಾಧ್ಯದಾಗಿದೆ. ಒಂದು ದೇಶದಲ್ಲಿ ಮುಗ್ಗಟ್ಟು ಅಥವಾ ಉತ್ಕರ್ಷ ತಲೆದದೋರಿದರೆ ಆ ದೇಶದೊಂದಿಗೆ ಸಂಬಂಧ ಹೊಂದಿರುವ ಇತರ ದೇಶಗಳಿಗೂ ಅದು ಕ್ರಮೇಣ ಹಬ್ಬದಿರಲಾರದು. ಆದ್ದರಿಂದ ಸರ್ಕಾರ ಹಣದ ಅಂತರಿಕ ಹಾಗೂ ಬಾಹ್ಯ ಮೌಲ್ಯಗಳಲ್ಲಿ ಸಮತೋಲ ಏರ್ಪಡಿಸುವುದು ಅವಶ್ಯವಾಗುತ್ತದೆ. ದೇಶದಲ್ಲಿ ಸಂಪೂರ್ಣ ಉದ್ಯೋಗ ಸಾಧಿಸುವಂತೆ ಬೆಲೆಗಳಲ್ಲಿ ಭದ್ರತೆ ಕಾಯ್ದು ಕೊಂಡು ಹೋಗಬೇಕಾಗುತ್ತದೆ. ಬೆಲೆಗಳ ಸ್ಥಾಯೀಕರಣ ಮತ್ತು ಸಂಪೂರ್ಣ ಉದ್ಯೋಗ ಇವು ಸರ್ಕಾರದ ಹಣಕಾಸು ಧೋರಣೆಯ ಮುಖ್ಯ ಧ್ಯೇಯಗಳಾಗಬೇಕು. ಬೆಲೆಗಳಲ್ಲಿ ತೀವ್ರ ಏರುತಗ್ಗುಗಳಿಲ್ಲದೆ ದೃಢವಾಗಿ ಊಧ್ರ್ವ ಗಾಮಿಯಾಗಿರುವಂತೆ ಹಣಕಾಸು ಧೋರಣೆ ರೂಪಿತವಾದರೆ ಅದರಿಂದ ಉದ್ಯಮಿಗಳ ಚಟುವಟಿಕೆಗಳಿಗೆ ಉತ್ತೇಜನ ದೊರೆತು ಉತ್ಪಾದನೆಯಲ್ಲಿ ಆಧಿಕ್ಯ ಸಾಧಿಸಬಹುದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಇಂಥ ಧೋರಣೆ ಆರ್ಥಿಕ ಆಭಿವೃದ್ಧಿಯ ದೃಷ್ಟಿಯಿಂದ ಸರಿಯಾಗದೆಂದೂ ವ್ಯಾಪಾರ ಚಕ್ರದ ದುಷ್ಪರಿಣಾಮಗಳನ್ನು ತಡೆಗಟ್ಟಲು ಬೆಲೆಗಳ ಸ್ಥಾಯೀಕರಣವೊಂದೇ ಯುಕ್ತವೆಂದೂ ಅನೇಕ ಅರ್ಥ ಶಾಸ್ತ್ರಜ್ಞರ ಅಭಿಪ್ರಾಯ. ಬೆಲೆಗಳ ಸ್ಥಾಯೀಕರಣದ ಧೋರಣೆಯ ಲಾಭಿಗಳಿವು: 1. ಸಾಲ ಕೊಡುವುದು ಮತ್ತು ತೆಗೆದುಕೊಳ್ಳುವುದು ಇಬ್ಬರಿಗೂ ಸಮವಾದ ನ್ಯಾಯ ದೊರೆಯುವುದು. 2. ವ್ಯವಹಾರದ ಅನಿಶ್ಚಿತತೆ ಹಾಗೂ ಆತಂಕಗಳು ದೂರವಾಗಿ ಆರ್ಥಿಕ ಚಟುವಟಿಕೆಗಳು ವ್ಯವಸ್ಥಿತ ರೀತಿಯಲ್ಲಿ ಸಾಗುವುವು. ಕಾರ್ಮಿಕರ ಮತ್ತು ಉದ್ಯಮಿಗಳ ನಡುವಣ ಕಲಹಗಳು ದೂರವಾಗಿ ಸ್ಥಿರ ಹಾಗೂ ಶಾಂತಿಯುತ ಔದ್ಯೋಗಿಕ ವಾತಾವರಣದಲ್ಲಿ ಉತ್ಪಾದನೆ ಹೆಚ್ಚುವುದು. 

	ಬೆಲೆಗಳ ಸ್ಥಾಯೀಕರಣದಲ್ಲಿ ಕೆಲವು ಹಾನಿಗಳೂ ಇವೆಯೆನ್ನಲಾಗಿದೆ. ಬಂಡವಾಳವಾದಿ ಅರ್ಥ ವ್ಯವಸ್ಥೆಯಲ್ಲಿ ಉತ್ಪಾದನೆಯ ಗಾತ್ರ ಸ್ಥಿರವಾಗಿ ಉದ್ಯಮಗಳ ಬೆಳೆವಣಿಗೆಗೆ ಸಾಕಷ್ಟು ಉತ್ತೇಜನ ದೊರೆಯಲಾರದು. ಇದು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಕೆಲವು ಉದ್ಯಮಿಗಳು ಅಧಿಕ ಲಾಭದ ಉದ್ದೇಶದಿಂದ ಉತ್ಪಾದನೆಯಲ್ಲಿ ನವೀಕರಣದ ಮೂಲಕ ಉತ್ಪಾದನೆಯ ವೆಚ್ಚದಲ್ಲಿ ಕಡಿತ ಸಾಧಿಸಿ ಲಾಭದ ಪ್ರಮಾಣ ಹೆಚ್ಚಿಸಿಕೊಳ್ಳಬಹುದು. ಇಂಥ ಕ್ರಮಗಳು ಅತಿಪ್ರಸರಣಕ್ಕೂ ಕಾರಣವಾಗಬಹುದು. 

	ಬೆಲೆಗಳನ್ನು ಸ್ಥಾಯೀಕರಿಸಬೇಕಾದರೆ ಹಣದ ಮೌಲ್ಯವನ್ನು ಸ್ಥಿರಗೊಳಿಸಬೇಕಾಗುವುದು. ಸರಕುಗಳ ಬೆಲೆಗಳನ್ನು ಹಣದಿಂದ ಅಳೆಯುತ್ತೇವೆ. ಹಣದ ಚಲಾವಣೆಯ ಗಾತ್ರದಲ್ಲಿ ಹೆಚ್ಚು ಕಡಿಮೆಯಾದರೆ ಬೆಲೆಗಳಲ್ಲೂ ಹೆಚ್ಚು ಕಡಿಮೆ ಆಗುವುದು. ಆದ್ದರಿಂದ ವಿಕ್‍ಸ್ಟೀಡ್, ಹಯೆಕ್ ಮತ್ತು ರಾಬರ್ಟ್‍ಸನ್ ಮೊದಲಾದ ಅರ್ಥಶಾಸ್ತ್ರಜ್ಞರು ಬೆಲೆಗಳ ಏರಿಳಿತಗಳನ್ನೂ ಅವುಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನೂ ತಡೆಯಬೇಕಾದರೆ ಹಣದ ಕಾರ್ಯಭಾರವನ್ನು ವಿನಿಮಯ ಮೌಲ್ಯ ಅಳೆಯುವುದಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಪ್ರತಿಪಾದಿಸಿದರು. ಹಣದ ವರ್ಚಸ್ಸು ಕಡಿಮೆ ಆಯಿತೆಂದರೆ ಬೆಲೆಗಳು ಉತ್ಪಾದನ ಶಕ್ತಿಯನ್ನು ಅವಲಂಬಿಸುತ್ತವೆ. ಉತ್ಪಾದನ ಕ್ಷೇತ್ರದಲ್ಲಿಯ ಅನೇಕ ಸುಧಾರಣೆಗಳ ಮೂಲಕ ಉತ್ಪಾದನೆ ಹೆಚ್ಚಿದಲ್ಲಿ ಬೆಲೆಗಳು ಇಳಿಯುತ್ತ ಹೋಗುವುವು. ಇದರಿಂದ ಪ್ರಚಲಿತ ಅರ್ಥವ್ಯವಸ್ಥೆಯಲ್ಲಿ ಉದ್ಯಮಗಳ ಉತ್ಪಾದನೆಗೆ ಪ್ರೋತ್ಸಾಹ ದೊರೆಯಲಾರದು. ಬೆಲೆಗಳ ಸ್ಥಾಯೀಕರಣದಿಂದ ಪ್ರತಿಯೊಂದು ಸರಕಿನ ಅಥವಾ ಸರಕುಗಳ ಗುಂಪಿನ ಬೆಲೆಗಳನ್ನು ನಿರ್ದಿಷ್ಟ ಪಡಿಸಲಾಗುವುದಿಲ್ಲ. ಸರಾಸರಿ ಬೆಲೆ ನಿರ್ದಿಷ್ಟ ಪರಿಮಿತಿಯಲ್ಲಿ ಹೆಚ್ಚುಕಡಿಮೆ ಆಗುವಂತೆ ಸ್ಥಾಯೀಕರಿಸಬೇಕಾಗುವುದು. ಸರಾಸರಿ ಬೆಲೆಯನ್ನು ವ್ಯಕ್ತಪಡಿಸುವ ಸೂಚಿ ಸಂಖ್ಯೆಗಳನ್ನು ಸರಿಯಾಗಿ ರಚಿಸಬೇಕು. ಪ್ರತ್ಯೇಕ ಸರಕಿನ ಕಾರಖಾನೆಯ ಉತ್ಪಾದನವೆಚ್ಚ ಅಥವಾ ಉತ್ಪಾದನಾ ಪದ್ಧತಿ ಅವಲಂಬಿಸಿ ಬೆಲೆ ಹೆಚ್ಚು ಕಡಿಮೆ ಆಗಬಹುದು. ಅಂದರೆ ಬೆಲೆಗಳಲ್ಲಿಯ ಸ್ಥಿರತೆ ಉತ್ಪಾದನೆಗೆ ಪ್ರೋತ್ಸಾಹ ನೀಡುವಂತಾಗಬೇಕು. ಇದರ ಆರ್ಥ ಬೆಲೆಗಳ ಸ್ಥಾಯೀಕರಣದಿಂದ ಉದ್ಯಮಿಗಳಿಗೆ ತಾವು ವಿನಿಯೋಜಿಸಿದ ಹಣದ ಮೇಲೆ ಯೋಗ್ಯ ಪ್ರಮಾಣದಲ್ಲಿ ಲಾಭ ದೊರೆಯುವಂತಿರಬೇಕು. ಆದ್ದರಿಂದ ಸರ್ಕಾರ ಹಾಗೂ ಮಧ್ಯವರ್ತಿ ಬ್ಯಾಂಕುಗಳು ಬ್ಯಾಂಕು ದರ, ಕರಭಾರ, ಸಾಲ, ಸಾರ್ವಜನಿಕ ವೆಚ್ಚ ಇವುಗಳ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಿ ಬೆಲೆಗಳನ್ನು ಕೆಳಮಟ್ಟದಲ್ಲಿ ಸ್ಥಿರಗೊಳಿಸಬಹುದು. ಆದರೆ ನಿಜವಾದ ಸಮಸ್ಯೆಯೆಂದರೆ ಯುಕ್ತವಾದ ಸರಾಸರಿ ಬೆಲೆಯ ಮಟ್ಟ ಕಂಡುಹಿಡಿಯುವುದು ಕಷ್ಟ ಎಂಬುದೇ. 

	ಬೆಲೆಗಳ ಸ್ಥಾಯೀಕರಣ ಧೋರಣೆಯನ್ನು ಅಮೆರಿಕವೂ ಸೇರಿದಂತೆ ಅನೇಕ ದೇಶಗಳು ರೂಪಿಸಿವೆ. 1933ರಲ್ಲಿ ಚಿನ್ನದ ಬೆಲೆ ಬಹಳಮಟ್ಟಿಗೆ ಇಳಿಯಲಾರಂಭಿಸಿದ ಕೂಡಲೇ ಅಮೆರಿಕದ ಅಧ್ಯಕ್ಷರ ಆದೇಶಾನುಗುಣವಾಗಿ ಸ್ವರ್ಣ ಪ್ರಮಿತಿಯ ನಾಣ್ಯಪದ್ಧತಿಯನ್ನು ಸ್ಥಗಿತಗೊಳಿಸಲಾಯಿತು. ಹಣದ ಮೌಲ್ಯವನ್ನು ಬ್ಯಾಂಕ್ ದರ ಮತ್ತು ಪ್ಭೆಟೆಯ ಮುಕ್ತವ್ಯವಹಾರಗಳ ಮೂಲಕ ದೃಢಗೊಳಿಸಲು ಅಲ್ಲಿಯ ಫೆಡರಲ್ ರಿಸರ್ವ್ ಬೋರ್ಡಿಗೆ ಆದೇಶ ನೀಡಲಾಯಿತು. ಇಂಗ್ಲೆಂಡ್ ಮತ್ತು ಇತರ ದೇಶಗಳು ಬ್ಯಾಂಕ್ ದರ ಹೆಚ್ಚಿಸಿ ವಿನಿಯೋಜನೆಯ ಗಾತ್ರ ನಿಯಂತ್ರಿಸಲು ಕ್ರಮ ಕೈಗೊಂಡವು. ಈಚೆಗೆ ಅಮೆರಿಕ ಸರ್ಕಾರ ಹಣ್ಣು ಹಂಪಲು, ತರಕಾರಿ, ಹಾಲು ಮತ್ತು ಹೈನು ಪದಾರ್ಥಗಳಿಗೆ ಸಂಬಂಧಿಸಿದಂತೆ ಬೆಲೆಗಳನ್ನು ಸ್ಥಿರಗೊಳಿಸಲು ಕ್ರಮ ಕೈಗೊಂಡಿದೆ. ಭಾರತದಲ್ಲಿ ಸರ್ಕಾರ ಅರ್ಥಿಕ ಪ್ರಗತಿ ಸಾಧಿಸಲು ಬೆಲೆಗಳ ಸ್ಥಿರತೆಯ ಧೋರಣೆಯನ್ನು ರೂಪಿಸುತ್ತಿದೆ. ಇತ್ತೀಚೆಗೆ ವರಮಾನ, ವೇತನ ಹಾಗೂ ಬೆಲೆಗಳ ಧೋರಣೆ ಕುರಿತು ಮದನ್ ಸಮಿತಿ ತನ್ನ ಶಿಫಾರಸುಗಳನ್ನು ನೀಡಿದೆ. ಬೆಲೆ ಧೋರಣೆ ಕೃಷಿ ಉತ್ಪಾದನೆ ಮತ್ತು ಆಹಾರವಸ್ತುಗಳ ಸರಿಯಾದ ವಿತರಣೆಗೆ ಅನುಕೂಲವಾಗಿ ಬೆಲೆ ಧೋರಣೆ ಇರಬೇಕೆಂಬುದು ಈ ಸಮಿತಿಯ ಅಭಿಪ್ರಾಯ. ಕೈಗಾರಿಕಾ ಕ್ಷೇತ್ರಗಳಲ್ಲಿ ಅಧಿಕ ಉತ್ಪಾದನೆಗೆ ಅದು ಪ್ರೋತ್ಸಾಹಕವಾಗಿರಬೇಕು. ಜನರ ಅಥವಾ ಕಾರ್ಮಿಕರ ವರಮಾನದಲ್ಲಿ ಸ್ವಲ್ಪ ಮಟ್ಟಿನ ಉಳಿತಾಯಕ್ಕೆ ಅದು ಅನುಕೂಲವಾಗಿರಬೇಕು. 
(ಎಸ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ